ಲೇಖಕನೂ ಇದನ್ನೇ ವ್ಯಾಖ್ಯಾನಿಸಿದ್ದನಾ?

  ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಬಹಳಷ್ಟು ಸಮಯವನ್ನು ಯಾವುದಾದರೊಂದು ಕಲೆಯ ಪ್ರಕಾರವನ್ನು ನೋಡಿರಲು ಅಥವ  ಕೇಳಿರಲು ಉಪಯೋಗಿಸಿರುತ್ತಾನೆ.  ಸಾಹಿತ್ಯ, ಸಂಗೀತ, ಪುಸ್ತಕಗಳನ್ನು ಓದುವುದು, ಹಾಡುಗಳನ್ನು ಕೇಳುವುದು, ಚಲನಚಿತ್ರಗಳನ್ನು ನೋಡುವುದು. ಒಂದೇ-ಎರಡೇ,  ಹೀಗೆ ಇನ್ನೂ ಎಷ್ಟೋ ವಿಧದಲ್ಲಿ ಮನುಷ್ಯ ಸಹಸ್ರಾರು ಗಂಟೆಗಳಷ್ಟು ಅವಧಿಯನ್ನು ಯಾವುದಾದರೂ ಅಥವ ಎಲ್ಲ ವಿಧದ  ಕಲೆಯನ್ನು ಸೃಷ್ಠಿಸುವುದರಲ್ಲಿ ಅಥವ ಅನುಭವಿಸುವುದರಲ್ಲಿ ಉಪಯೋಗಿಸಿರುತ್ತಾನೆ. 


ಎಷ್ಟು ಜನ ಮನುಷ್ಯರೋ ಅಷ್ಟು ವಿಧದ ಚಿಂತನೆಗಳು, ಅನುಭವಗಳು. ಕೇವಲ ಭೌತಿಕವಾಗಿ ಮಾತ್ರವಲ್ಲದೇ ಪ್ರತಿಯೊಂದು ಚಿಕ್ಕ-ಚಿಕ್ಕ ಅಂಶಗಳಲ್ಲಿಯೂ ಸಹ ಒಬ್ಬರಂತೆ ಇನ್ನೊಬ್ಬರಿಲ್ಲ, ಪ್ರತಿಯೊಬ್ಬರೂ ಬೇರೆಯೇ. ಹಾಗೆಯೇ ಒಬ್ಬ ವ್ಯಕ್ತಿಯ ಸಾಹಿತ್ಯ, ಹಾಗೂ ಅದು ಪ್ರಕಟಿಸುವ ಭಾವವು ಓದುವುನಿಗೆ ಗ್ರಹಿಕೆಯಾಗುವುದು, ಬರೆದ ಸಾಹಿತಿಯ ಉದ್ದೇಶ, ಅನುಭವ ಹಾಗೂ ತಿಳುವಳಿಕೆಯ ಆಧಾರದ ಮೇಲೆ ಮಾತ್ರವಲ್ಲ, ಬದಲಿಗೆ ಓದುವ ವ್ಯಕ್ತಿಯ ತಿಳುವಳಿಕೆ, ಗ್ರಹಣಶಕ್ತಿ, ಜೀವನಾನುಭವ ಅಷ್ಟೇ ಏಕೆ ಓದುವ ಸಮಯ ಹಾಗೂ ಓದುವಾಗಿದ್ದ ಆತನ ಮನಸ್ಥತಿಯ ಮೇಲೂ ಸಹ ವ್ಯಾಪಕವಾಗಿ ಅವಲಂಬಿತವವಾಗಿದೆ.


ಇನ್ನೂ ಕೇಲವು ಬಾರಿ ಸಾಹಿತ್ಯವನ್ನು ಬರೆದ ಕವಿ ತಾತ್ವಿಕವಾಗಿ ಅಷ್ಟು ಆಳದಲ್ಲಿ ಆಲೋಚಿಸಿರದ ಯಾವುದೋ ಒಂದು ಸಾಲು ಮುಂದೆ ಯಾರೋ ಓದುಗ ತನ್ನ ಜೀವನದ ತತ್ವಶಾಸ್ತ್ರದ ಉಪ್ಪು-ಕಾರ ಹಾಕಿ ಹೊಸ ಅರ್ಥದ ಅಡುಗೆಯನ್ನು ಆ ಸಾಲಿನಿಂದ ತಯಾರಿಸಬಹುದು. ಹೀಗೆ ಮಾಡಿದರೆಂದು ಇಲ್ಲಸಲ್ಲದ ಅರ್ಥವನ್ನು ಕೊಟ್ಟರೆಂದು ಆ ಓದುಗನನ್ನು ನಾವು ಯಾರೂ ದೂಷಿಸುವಂತಿಲ್ಲ. ಸ್ವಲ್ಪ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ದೃಶ್ಯದ ತುಣುಕೊಂದನ್ನು ನೋಡಿದೆ, ಅದರಲ್ಲಿ ಒಂದು ಶಾಲೆಯಲ್ಲಿ(ಕಾಲ್ಪನಿಕ) ಶಿಕ್ಷಕರೊಬ್ಬರು ಒಂದು ಇಂಗ್ಲೀಷ್‌ ಕಾವ್ಯದ ಅರ್ಥವನ್ನು ವಿವರಿಸುವಾಗ ಯಾವುದೋ ಒಂದು ಸಾಧಾರಣ ಸಾಲನ್ನು "ಕವಿ ಹಾಗೆ ಸರಳವಾಗಿ ಹೇಳಿಲ್ಲ, ಅದರ ಒಳಾರ್ಥ‌ ಅದು-ಇದು, ಹೀಗೆ-ಹಾಗೆ" ಎಂದು ವಿವರಿಸುತ್ತಾನೆ. ನಂತರ ಆ ದೃಶ್ಯ ಸ್ವರ್ಗಕ್ಕೆ ಬದಲಾಗುತ್ತದೆ, ಸತ್ತ ಆ ಕವಿ ಸ್ವರ್ಗದಲ್ಲಿ ತಲೆ ಕೆರೆದುಕೊಳ್ಳುತ್ತಾ ಹೇಳುತ್ತಾನೆ. "ಇದೆಲ್ಲವನ್ನು ನಾನೆಂದು ಆಲೋಚಿಸಿರಲೇಯಿಲ್ಲವಲ್ಲ. ಇವರು ಹೀಗೆಲ್ಲ ತಿಳಿದುಕೊಂಡ್ರಾ?!!" ಅಂತ. ಹೀಗೆ ಎಷ್ಟೋ ಸಲ ಇಲ್ಲದ್ದನ್ನು ಇದೇ ಅಂದುಕೊಂಡು, ಇದ್ದದನ್ನು ಗುರುತು ಹಿಡಿಯದೆಯೇ ಹಾಗೆ ಗಾಳಿಗೆ ತೂರಿ, ನಮ್ಮ-ನಮ್ಮ ಅನುಭವ ಹಾಗೂ ಜ್ಞಾನದ ಆಧಾರದ ಮೇಲೆ ತಿಳಿದುಕೊಳ್ಳುವುದೇ ಹಾಗೂ ನಂತರ ಬೀಗುವುದೇ ಮನುಷ್ಯರ ಲಕ್ಷಣ. ಹಾಗಾಗಲಿಲ್ಲ ಅನ್ನಿ, ಆಗ ನೈಜ ತೊಂದರೆ. 


ಇದನ್ನ ತಿಳಿದ ಬಳಿಕ ಒಂದು ಪ್ರಶ್ನೆ ಬರಬಹುದು, "ಹೀಗೆ ಅಪೂರ್ಣವಾಗಿ, ಅರ್ಥ ಹೀನವಾಗಿ, ಹೊಸ ಅರ್ಥ ಹಾಕಿ ಓದುವುದು/ನೋಡುವುದು/ಕೇಳುವುದೇ ಆದರೆ ಅದರ ಬದಲಿಗೆ ಸುಮ್ಮನಿರುವುದೇ ಲೇಸು" ಎಂದು. ಆದರೆ ಇದು ಹೇಗಾಗುತ್ತದೆ ಎಂದರೆ "ವ್ಯಾಯಾಮ ಮಾಡುವುದು ದೇಹಕ್ಕೆ ಒಳಿತೆಂದು ನಮಗೆ ಗೊತ್ತು, ಆದರೆ ಬೆವರು ಬರುತ್ತದೆ ಎಂಬ ಕಾರಣಕ್ಕೆ ವ್ಯಾಯಾಮವನ್ನು ಮಾಡುವುದನ್ನೇ ಬಿಟ್ಟರೆ, ನಾವು ಪಡೆದುಕೊಂಡ ಅಶಾಶ್ವತ ಶುಭ್ರತೆಗಿಂತ ಕಳೆದುಕೊಳ್ಳುವುದೇ ಹೆಚ್ಚು." ಆದರೆ ಈಗೀಗ ಜನರು ವ್ಯಾಯಾಮವನ್ನೂ ಮಾಡುತ್ತಿಲ್ಲ ಹಾಗೂ ಸಾಹಿತ್ಯವನ್ನು ಓದುತ್ತಿಲ್ಲ(ಬಹು ಕಡಿಮೆ ಓದುಗರು ಇರುವರು), ಅದು ಬೇರೆಯ ವಿಷಯ. 


ಎಸ್‌ ಎಲ್‌ ಭೈರಪ್ಪನವರ ಪುಸ್ತಕಗಳನ್ನು ಓದಿದಾಗ ಹೀಗೆ ಜೀವನದ ಬಗ್ಗೆ ಹಲವಾರು ಪ್ರಶ್ನೆಗಳು ಮತ್ತು ಅವಕ್ಕೆ ಅವರವರ ಉತ್ತರಗಳು ಅವರಿಗೆ(ಪ್ರಶ್ನೆಯನ್ನು ಕೇಳಿಕೊಂಡವರಿಗೆ) ದೊರೆತಿರಬಹುದು. ಅವರ ಪುಸ್ತಕಗಳ(ಎಲ್ಲವನ್ನೂ ನಾನಿನ್ನೂ ಓದಿಲ್ಲ) ದೊಡ್ಡ ಅಭಿಮಾನಿ ನಾನು. ಆದರೆ ಅವರ ʼಪರ್ವʼ ಪುಸ್ತಕವನ್ನು ಓದುತ್ತಿದ್ದಾಗ ಅದರಲ್ಲಿನ ಒಂದು ಸಾಲು ನನಗೆ ಈ ಬರಹವನ್ನು ಬರೆಯಲು ಮಾರ್ಗವನ್ನು ತೋರಿತು. ಅದುವೇ,

"ಅಭ್ಯಾಸವಾದ ಅಲೆಗಳ ಸದ್ದು ನಿಶಬ್ಧವಾಗಿತ್ತು ."


ಇದೇನು ಸಾಲು, ಎನ್ನಿಸಿರಬಹುದು. ಆದರೊಮ್ಮೆ ಪರ್ವ ಪುಸ್ತಕವನ್ನೊದಿ, ನಿಮಗೂ ಹೀಗೆ ನನಗೆ ಕಾಣದ/ಅರಿವಾಗಿರದ, ನಿಮ್ಮ ಅನುಭವಾಮೃತದಲ್ಲಿ ಮಿಂದ ಎಷ್ಟೋ ಸಾಲುಗಳು ಸಿಗಬಹುದು.


"ಪರ್ವ ಪುಸ್ತಕವನ್ನು ನನಗೆ ಉಡುಗೊರೆ ನೀಡಿದ ಗೆಳೆಯ ಪ್ರಶಾಂತ ಭಟ್, ಇವನಿಗೆ ನಾನು ಚಿರಋಣಿ,"


ಧನ್ಯವಾಧಗಳು.


ರಾಕೇಶ ವಲ್ಲಭ ವೈದ್ಯ.

Comments

Popular posts from this blog

ಕ್ವಾಂಟಮ್ ಸೂಪರ್‌ಪೋಸಿಷನ್ ಮತ್ತು ಮಾನವ ಪ್ರಜ್ಞೆ - ಒಂದು ಅನಿರೀಕ್ಷಿತ ನಂಟು

ಕತೆಗಾರನೊಬ್ಬನ ಪಾತ್ರದಲ್ಲಿ: