ಕತೆಗಾರನೊಬ್ಬನ ಪಾತ್ರದಲ್ಲಿ:

 ನಮಸ್ಕಾರ,


    ಮನುಷ್ಯ ತನ್ನ ಜೀವನದಲ್ಲಿ ಸಾಕಷ್ಟನ್ನು ಕಲಿಯುತ್ತಾನೆ, ಸಾಕಷ್ಟನ್ನು ಕಲಿಸುತ್ತಾನೆ. ಕಲಿತ ಅಥವ ಕಲಿಸಿದ ಎಷ್ಟೋ ವಿದ್ಯೆಗಳು, ತಿಳುವಳಿಕೆ, ಸತ್ಯ, ಜ್ಞಾನ ಎಲ್ಲವನ್ನು ಪ್ರತಿ ಮನುಷ್ಯನು ತನ್ನದ್ದೆಂದು ಪೂರ್ವನಿಯೋಜಿತವಾಗಿಯೇ ಭಾವಿಸುತ್ತಾನೆ. ಆದರೆ ಯಾವಾಗಲಾದರೊಂದು  ಕ್ಷಣ ʼತನ್ನದುʼ ಎನ್ನುವ ಆ ಭಾವನೆಯನ್ನು ನಾಶ ಮಾಡಿ, ನೈಜತೆಯ ಹುಡುಕಾಟದ ದೃಷ್ಟಿಯಿಂದ ನೋಡಿದಾಗ ತಿಳಿಯುತ್ತದೆ,ಕೇವಲ ಭೌತಿಕ ಮತ್ತು  ಪ್ರಾಪಂಚಿಕವಾದ ವಸ್ತುಗಳು ಮಾತ್ರವಲ್ಲದೇ, ತನ್ನಲ್ಲಿರುವ ಶ್ರೇಷ್ಠ ಅಂಶ ಎಂದವನು ಹೆಮ್ಮೆಯಿಂದಿರುವ ಅವನ ಜ್ಞಾನವನ್ನು ಸಹ  ಆತ ಪ್ರಪಂಚದಿಂದ ಎರವಲು ಪಡೆದದ್ದು  ಎಂದು. ಇಷ್ಟೇ  ನಾವು  ಮನುಷ್ಯರು ಎಂದು. ಇದನ್ನು ಜೀರ್ಣಿಸಿಕೊಳ್ಳಲು ಎರಡು ದೃಷ್ಟಿಕೋನಗಳುಂಟು, ಮೊದಲನೇಯದು, ಯಾವುದೂ ಸಹ  ನನ್ನದ್ದಲ್ಲ ಎಂದು  ದುಃಖಿಸುವುದು. ಎರಡನೇಯದು, ಎಲ್ಲವೂ  ನನಗಾಗಿಯೇ ಇದೆ ಎಂದುಕೊಳ್ಳುವುದು. ಆದಿಕಾಲದಿಂದಲೂ  ತಿಳಿದೆಲ್ಲರೂ ಹೇಳಿದ್ದು  ಎರಡನೇಯ ಭಾವವೇ ಘನವಾದದ್ದು  ಎಂದು. 


ಬಾಲ್ಯದಿಂದಲೂ ಹೀಗೆ ಸಹಸ್ರಾರು ಕತೆಗಳನ್ನು ಕೇಳಿ, ನೋಡಿ , ಹೇಳಿ , ಮಾತನಾಡಿ ಬಂದಿರುವ ನನ್ನಲ್ಲಿಯೂ  ಸಹ ಒಬ್ಬ ಕತೆಗಾರನಿದ್ದಾನೆ.(ನನ್ನಲ್ಲಿ  ಮಾತ್ರವಲ್ಲ ನಿಮ್ಮೆಲ್ಲರಲ್ಲಿಯೂ ಸಹ  ಇದ್ದಾನೆ/ಳೆ). ಕತೆ ಹೇಳಬಯಸುವ ಅವನ ಆಸೆ ಯಾವ ಮಟ್ಟ ಮೀರಿತೆಂದರೇ, ಕೇವಲ ಕಲ್ಪನೆ ಮಾತ್ರವಾಗಿರದೇ  ಅದು ನೈಜತೆಯೂ ಆಯಿತು. ಕತೆಗಾರನಾಗಿ ನಾನು ಬರೆದ ಮೊದಲ ಪುಸ್ತಕ "Embers of Trust" ಎನ್ನುವ ಪುಸ್ತಕವನ್ನು Amazon KDP ಕಾರ್ಯಾಕ್ರಮದಡಿಯಲ್ಲಿ ಈ ವರ್ಷವೇ ನಾನು ಪ್ರಕಟಿಸಿದ್ದೇನೆ. 


ಒಂದು ಊರಿನಲ್ಲಿ  ಹಲವು  ಕುಟುಂಬಗಳ ಸುತ್ತಣ ನಡೆಯುವ ಒಂದು ಪತ್ತೇದಾರಿ ಕತೆ, ಸಮಂತಾ ಎನ್ನುವ  ಹುಡುಗಿಯೊಬ್ಬಳು  ಅಡಗಿದ  ಹಲವು ಸತ್ಯಗಳ ಅನ್ವೇಷಣೆಯಲ್ಲಿ  ಯಶಸ್ವಿಯಾದಾಗ ಜರಗುವ  ಘಟನೆಗಳ ಮಹಾನಾಟಕದ ಮೊದಲ  ಹಲವು ದೃಶ್ಯಗಳೇ ಈ ಚಿಕ್ಕ ಪುಸ್ತಕ. ಇದು ಕೇವಲ ಭಾಗ ಒಂದು ಮಾತ್ರ. ಅಡಗಿರುವ ಸತ್ಯಗಳು ಗುಹೆಯಲ್ಲಿ ಹಸಿದು ಮಲಗಿದ ವ್ಯಾಘ್ರನ ಹಾಗೆ. ಅದನ್ನು ಕೆಣಕಿದ ಮೇಲೆ ಅದರ ರೌದ್ರಪ್ರತಾಪವನ್ನು  ಎದುರಿಸುವುದು ಹೇಗೆ ಅನಿವಾರ್ಯವೋ, ಅಂತೆಯೇ ಸತ್ಯಗಳನ್ನು ಹೊರತೆಗೆದ ಸಮಂತಾಳಿಗೆ ಬಂದೊದಗಿದ ಸಂಕಷ್ಟಗಳನ್ನು ನೀವು ತಿಳಿಯಲೇಬೇಕು. ಪುಟ ತಿರುವಿದಂತೆಲ್ಲ ಹೊಸ ಸತ್ಯ-ಸುಳ್ಳು, ಪ್ರೀತಿ-ದ್ವೇಷ, ನಂಬಿಕೆ-ದ್ರೋಹಗಳು ಬಂದು ನಿಮ್ಮ ಮುಂದೆ ನಿಲ್ಲುತ್ತವೆ.


ಏತಕ್ಕೆ?

ನಾನು ಏತಕ್ಕಾಗಿ ಈ ಪುಸ್ತಕವನ್ನು ಬರೆದೆ? ಎಂದರೆ, ಪತ್ತೇದಾರಿ ಕಾದಂಬರಿಗಳಲ್ಲಿ  ಆಗುವ ಘಟನೆಗಳಿಗಿಂತ, ಆ ಘಟನೆಗಳನ್ನು ಉಂಟುಮಾಡುವ ಮನುಷ್ಯನ ಮನಸ್ಸನ್ನು ಅರಿಯುವ ಅಧ್ಬುತ  ಸಾಧ್ಯತೆಯಿದೆ. ಹಾಗಾಗಿ, ಮನುಷ್ಯನ ಬಗ್ಗೆ ಮನುಷ್ಯರೇ ಸಂಪೂರ್ಣವಾಗಿ ತಿಳಿಯದಿದ್ದರೆ, ಇನ್ಯಾವ ಪ್ರಾಣಿ ತಾನೇ ತಿಳಿಯಲು ಬಯಸೀತು?

ಇದು ಕೇವಲ ಆರಂಭವಷ್ಟೇ, ಇನ್ನೂ ನೂರಾರು ಬರಹಗಳು, ಅತೀ ಸಮೀಪದಲ್ಲೇ ಭಾಗ ೨ ಸಹ ನಿಮ್ಮ ಮುಂದಿರುತ್ತದೆ. ಮತ್ತೊಂದು ಖುಷಿಯ ಸುದ್ದಿಯನ್ನು  ನಿಮ್ಮೆಲ್ಲರಿಗೂ ತಿಳಿಸಲು  ನಾನು ಬಯಸುತ್ತೇನೆ, ದಿನಾಂಕ 25/08/2025 ರಿಂದ 29/08/2025 ರವರೆಗೆ Amazon Kindle ನಲ್ಲಿ ನನ್ನ ಪುಸ್ತಕ ಉಚಿತವಾಗಿ ಲಭ್ಯವಿದೆ. ನೀವು ಉಚಿತವಾಗಿಯೇ ಓದಬಹುದು, ನೆನಪಿರಲಿ ಕೇವಲ  ಐದು ದಿನ ಮಾತ್ರ. ತಪ್ಪದೇ ಓದಿರಿ. ನಿಮ್ಮಲ್ಲಿನ ಕೇಳುಗನ ಆಸೆಯನ್ನು ತಣಿಸಿ. ನಿಮ್ಮ ಅಭಿಪ್ರಾಯಗಳನ್ನು ತಿಳಿಯಲು  ನಾನು ಎಂದಿಗೂ ಉತ್ಸುಕ. 


Link: CLICK HERE TO READ THE BOOK


ಧನ್ಯವಾದಗಳು,


ರಾಕೇಶ ವಲ್ಲಭ ವೈದ್ಯ. 

Comments

Popular posts from this blog

ಕ್ವಾಂಟಮ್ ಸೂಪರ್‌ಪೋಸಿಷನ್ ಮತ್ತು ಮಾನವ ಪ್ರಜ್ಞೆ - ಒಂದು ಅನಿರೀಕ್ಷಿತ ನಂಟು

ಲೇಖಕನೂ ಇದನ್ನೇ ವ್ಯಾಖ್ಯಾನಿಸಿದ್ದನಾ?