ಕತೆಗಾರನೊಬ್ಬನ ಪಾತ್ರದಲ್ಲಿ:
ನಮಸ್ಕಾರ, ಮನುಷ್ಯ ತನ್ನ ಜೀವನದಲ್ಲಿ ಸಾಕಷ್ಟನ್ನು ಕಲಿಯುತ್ತಾನೆ, ಸಾಕಷ್ಟನ್ನು ಕಲಿಸುತ್ತಾನೆ. ಕಲಿತ ಅಥವ ಕಲಿಸಿದ ಎಷ್ಟೋ ವಿದ್ಯೆಗಳು, ತಿಳುವಳಿಕೆ, ಸತ್ಯ, ಜ್ಞಾನ ಎಲ್ಲವನ್ನು ಪ್ರತಿ ಮನುಷ್ಯನು ತನ್ನದ್ದೆಂದು ಪೂರ್ವನಿಯೋಜಿತವಾಗಿಯೇ ಭಾವಿಸುತ್ತಾನೆ. ಆದರೆ ಯಾವಾಗಲಾದರೊಂದು ಕ್ಷಣ ʼತನ್ನದುʼ ಎನ್ನುವ ಆ ಭಾವನೆಯನ್ನು ನಾಶ ಮಾಡಿ, ನೈಜತೆಯ ಹುಡುಕಾಟದ ದೃಷ್ಟಿಯಿಂದ ನೋಡಿದಾಗ ತಿಳಿಯುತ್ತದೆ,ಕೇವಲ ಭೌತಿಕ ಮತ್ತು ಪ್ರಾಪಂಚಿಕವಾದ ವಸ್ತುಗಳು ಮಾತ್ರವಲ್ಲದೇ, ತನ್ನಲ್ಲಿರುವ ಶ್ರೇಷ್ಠ ಅಂಶ ಎಂದವನು ಹೆಮ್ಮೆಯಿಂದಿರುವ ಅವನ ಜ್ಞಾನವನ್ನು ಸಹ ಆತ ಪ್ರಪಂಚದಿಂದ ಎರವಲು ಪಡೆದದ್ದು ಎಂದು. ಇಷ್ಟೇ ನಾವು ಮನುಷ್ಯರು ಎಂದು. ಇದನ್ನು ಜೀರ್ಣಿಸಿಕೊಳ್ಳಲು ಎರಡು ದೃಷ್ಟಿಕೋನಗಳುಂಟು, ಮೊದಲನೇಯದು, ಯಾವುದೂ ಸಹ ನನ್ನದ್ದಲ್ಲ ಎಂದು ದುಃಖಿಸುವುದು. ಎರಡನೇಯದು, ಎಲ್ಲವೂ ನನಗಾಗಿಯೇ ಇದೆ ಎಂದುಕೊಳ್ಳುವುದು. ಆದಿಕಾಲದಿಂದಲೂ ತಿಳಿದೆಲ್ಲರೂ ಹೇಳಿದ್ದು ಎರಡನೇಯ ಭಾವವೇ ಘನವಾದದ್ದು ಎಂದು. ಬಾಲ್ಯದಿಂದಲೂ ಹೀಗೆ ಸಹಸ್ರಾರು ಕತೆಗಳನ್ನು ಕೇಳಿ, ನೋಡಿ , ಹೇಳಿ , ಮಾತನಾಡಿ ಬಂದಿರುವ ನನ್ನಲ್ಲಿಯೂ ಸಹ ಒಬ್ಬ ಕತೆಗಾರ ನಿದ್ದಾನೆ.(ನನ್ನಲ್ಲಿ ಮಾತ್ರವಲ್ಲ ನಿಮ್ಮೆಲ್ಲರಲ್ಲಿಯೂ ಸಹ ಇದ್ದಾನೆ/ಳೆ). ಕತೆ ಹೇಳಬಯಸುವ ಅವನ ...